ತೀಬಾ
 	1858-1916. ಬರ್ಮದ ಕೊನೆಯ ದೊರೆ (1878-1885) 1885ರಲ್ಲಿ ಮೇಲಣ ಬರ್ಮವನ್ನು ಬ್ರಿಟಿಷರು ಆಕ್ರಮಿಸಿದಾಗ ಈತನ ಆಳ್ವಿಕೆ ಕೊನೆಗೊಂಡಿತು. ಇವನ ತಂದೆ ಮಿಂಡೋನ್ ಮಿನ್ 1853-78ರಲ್ಲಿ ಬರ್ಮವನ್ನಾಳುತ್ತಿದ್ದ. ತನ್ನ ಪತ್ನಿಯರಲ್ಲಿ ಅವನಿಗೆ ಅನೇಕ ಮಕ್ಕಳಿದ್ದರು. ಆದರೆ ಅವರಲ್ಲಿ ಯಾರನ್ನೂ ಉತ್ತರಾಧಿಕಾರಿಯನ್ನಾಗಿ ನೇಮಿಸಲು ಹಿಂದೆಗೆದ. ತನ್ನ ಮಕ್ಕಳಲ್ಲಿ ಯೋಗ್ಯರಾದ ಮೂವರು ರಾಜಕುಮಾರರನ್ನು ತನ್ನ ಮರಣ ಕಾಲದಲ್ಲಿ ಆರಿಸಿ. ಅವರು ಬೇರೆ ಬೇರೆ ರಾಜಧಾನಿಗಳಿಂದ ಏಕಕಾಲದಲ್ಲಿ ರಾಜ್ಯವನ್ನು ಆಳುವಂತೆ ವಿದಿಸಿದ. ಆದರೆ ಅವನ ಮರಣಾನಂತರ ಈ ಏರ್ಪಾಡು ಮುರಿದುಬಿತ್ತು. ಮಿಂಡೋನ್ ಮಿನ್‍ನ ಕಿರಿಯ ಮಗ ತೀಬಾನನ್ನು ಮದುವೆಯಾಗಿದ್ದ ಸುಪಯಲತಳ ತಾಯಿ ಅಲೆನ್ಯಾಂಡಳ ಚಾತುರ್ಯದಿಂದ ತೀಬಾ ಸಿಂಹಾಸನವನ್ನೇರಿದ. 

	ಕೂಡಲೆ ಅವನು ಉಳಿದೆಲ್ಲ ರಾಜಕುಮಾರರನ್ನೂ ಸೆರೆಯಲ್ಲಿಟ್ಟು 1879ರ ಫೆಬ್ರುವರಿ ತಿಂಗಳ 15-17ರ ಸುಮಾರಿಗೆ ಅವರನ್ನು ಕೊಲೆಮಾಡಿಸಿದ. ಆ ವೇಳೆಗಾಗಲೆ ಬರ್ಮದಲ್ಲಿ ನೆಲೆಯೂರಿದ್ದ ಬ್ರಿಟಿಷ್ ವ್ಯಾಪಾರಿಗಳು ಇದರಿಂದ ಗಾಬರಿಗೊಂಡರು. ಬರ್ಮದ ರಾಜಕೀಯದಲ್ಲಿ ಬ್ರಿಟಿಷರು ಕೈಹಾಕಲು ಅದು ಸರಿಯಾದ ಸಮಯವೆಂದು ಅವರು ಭಾರತದಲ್ಲಿ ವೈಸ್‍ರಾಯ್‍ಗೆ ಮನವಿಪತ್ರಗಳನ್ನು ಕಳುಹಿಸಿದರು. ತೀಬಾನ ಆಳ್ವಿಕೆಯಲ್ಲಿ ತಮಗೆ ಒದಗಿದ್ದ ಕಷ್ಟಗಳನ್ನು ಅವರು ಬಣ್ಣ ಕೊಟ್ಟು ವಿವರಿಸಿದ್ದರು. ಆದರೂ ವೈಸ್‍ರಾಯ್ ಬರ್ಮದ ಅಂತರಿಕ ವ್ಯವಹಾರಗಳಲ್ಲಿ ತಲೆಹಾಕಲು ತೀರ್ಮಾನಿಸಲಿಲ್ಲ. ಮುಂದೆ ತೀಬಾ ಫ್ರಾನ್ಸ್ ಮತ್ತು ಇತರ ಯೂರೋಪಿಯನ್ ದೇಶಗಳೊಂದಿಗೆ ರಾಜತಾಂತ್ರಿಕ ಸಂಪರ್ಕ ಬೆಳೆಸಿದ. ಮುಖ್ಯವಾಗಿ ಫ್ರಾನ್ಸಿನೊಂದಿಗೆ ನಿಕಟಸಂಬಂಧ ಬೆಳೆಸಿ ತನ್ನ ರಾಯಭಾರಿಯನ್ನು ಅಲ್ಲಿಗೆ ಕಳುಹಿಸಿದ. ಫ್ರಾನ್ಸಿನ ರಾಯಭಾರಿ ಎಂ. ಹಾಸ್ ಬರ್ಮಕ್ಕೆ ಬಂದ. ಇರವಾಡಿ ರೈಲುಮಾರ್ಗ ನಿಮಾಣ, ಬರ್ಮಕ್ಕೆ ಫ್ರೆಂಚ್ ನೌಕಾಪಡೆಯ ನೆರವು - ಇವುಗಳ ಬಗ್ಗೆ ದೊರೆ ತೀಬಾ ಒಪ್ಪಂದ ಮಾಡಿಕೊಂಡ. ತನ್ನ ತಂದೆಯ ಕಾಲದಲ್ಲಿ ಬ್ರಿಟಿಷರು ವಶಪಡಿಸಿಕೊಂಡಿದ್ದ ಕೆಳಬರ್ಮವನ್ನು ಮತ್ತೆ ಗೆದ್ದುಕೊಳ್ಳಬೇಕೆಂಬುದು ತೀಬಾನ ಉದ್ದೇಶವಾಗಿತ್ತು. ತಮ್ಮ ಹಿತಕ್ಕೆ ಒದಗಬಹುದಾದ ಹಾನಿಯನ್ನು ಗಮನಿಸಿದ ಬ್ರಿಟಿಷರು ತೀಬಾನನ್ನು ಒತ್ತಾಯಿಸಿ ತಮ್ಮ ಕಡೆಗೆ ಸೆಳೆದುಕೊಳ್ಳಲು ಸಮಯ ಕಾಯುತ್ತಿದ್ದರು. ಅಂಥ ಸಮಯ ಬೇಗ ಬಂತು. ಬೊಂಬಾಯಿ - ಬರ್ಮ ವ್ಯಾಪಾರ ಕಂಪನಿ ಎಂಬ ಬ್ರಿಟಿಷ್ ಸಂಸ್ಥೆಯೊಂದರ ಮೇಲೆ ತೀಬಾ ವಂಚನೆಯ ಆಪಾದನೆ ಹೊರಿಸಿ, ಅದಕ್ಕೆ 2,30,000 ರೂಪಾಯಿ ದಂಡ ವಿಧಿಸಿ, ಅದರ ಆಡಳಿತವರ್ಗದವರನ್ನೆಲ್ಲ ಸೆರೆಯಲ್ಲಿಡಲು ಆಜ್ಞೆ ಮಾಡಿದ. ಇದರಿಂದ ಭಾರತದ ವೈಸ್‍ರಾಯ್ ಕೋಪಗೊಂಡು, ಬಂಧಿತರನ್ನೆಲ್ಲ ಕೂಡಲೆ ಬಿಡುಗಡೆ ಮಾಡುವಂತೆಯೂ ವ್ಯಾಪಾರ ಸಂಸ್ಥೆಯ ವಿಚಾರಣೆಯನ್ನು ಬ್ರಿಟಿಷ್ ರಾಜದೂತನ ಎದುರಿನಲ್ಲಿ ನಡೆಸಬೇಕೆಂದೂ ಭಾರತ ಸರ್ಕಾರಕ್ಕೆ ತಿಳಿಸದೆ ಬೇರಾವ ವಿದೇಶಗಳೊಂದಿಗೂ ತೀಬಾ ಸಂಪರ್ಕ ಹೊಂದಿರಕೂಡದೆಂದೂ ತಪ್ಪಿದರೆ ಯುದ್ಧವನ್ನೆದುರಿಸಬೇಕಾಗುವುದೆಂದೂ ಬೆದರಿಕೆ ಹಾಕಿದ (1885). ಇದಕ್ಕೆ ತೀಬಾ ಮಣಿಯಲಿಲ್ಲ. ಬದಲಾಗಿ ಬರ್ಮೀಯರು ಬ್ರಿಟಿಷರ ವಿರುದ್ಧ ಯುದ್ಧಕ್ಕೆ ಸಂಘಟಿತರಾಗಬೇಕೆಂದು ಕರೆಕೊಟ್ಟ. ಬ್ರಿಟಿಷರಿಗೂ ಅದೇ ಬೇಕಿತ್ತು. ಬರ್ಮದೊಂದಿಗೆ ಅವರು ಮೂರನೆಯ ಯುದ್ಧ ಹೂಡಲು ನಾಂದಿಯಾಯಿತು. 

	ಬ್ರಿಟಿಷ್ ಸೇನೆ ಹಾಗೂ ನೌಕಾಪಡೆಗಳು ಮೊದಲೇ ರಂಗೂನಿನ ಬಳಿ ಸಜ್ಜಾಗಿದ್ದುವು. ಬ್ರಿಟಿಷ್ ಸೇನಾನಿ ಪ್ರೆಂಡರ್ ಗ್ಯಾಸ್ಟನ ನೇತೃತ್ವದಲ್ಲಿ 1885ರ ನವೆಂಬರ್ 4ರಂದು ಅವು ಇರವಾಡಿಯವರೆಗೂ ನುಗ್ಗಿ ದಾಳಿ ನಡೆಸಿದುವು. ಬರ್ಮೀಯರು ಈ ಯುದ್ಧಕ್ಕೆ ಸಿದ್ಧರಾಗಿರಲಿಲ್ಲ. ಸಾಕಷ್ಟು ಸೇನೆಯಾಗಲಿ ಯುದ್ಧಸಾಮಗ್ರಿಯಾಗಲಿ ತೀಬಾನ ಬಳಿ ಇರಲಿಲ್ಲ. ಜನರೂ ಯುದ್ಧದಲ್ಲಿ ಉತ್ಸುಕರಾಗಿರಲಿಲ್ಲ. ತೀಬಾ ಕ್ರೂರಿಯೂ ಅವಿವೇಕಿಯೂ ಆಗಿದ್ದುದು ಇದಕ್ಕೆ ಕಾರಣ. ಸಾವಿರಾರು ಕಗ್ಗೊಲೆಗಳಿಗೆ ಕಾರಣನಾಗಿದ್ದ ಅವನಲ್ಲಿ ಪ್ರಜೆಗಳಿಗೆ ವಿಶ್ವಾಸವಿರಲಿಲ್ಲ. ಆದ್ದರಿಂದ ಬ್ರಿಟಿಷರ ವಿಜಯ ಶೀಘ್ರವೂ ಸುಲಭವೂ ಆಯಿತು. 1885ರ ನವೆಂಬರ್ 28ರಂದು ಅವರು ತೀಬಾನ ಅರಮನೆಯನ್ನು ಮುತ್ತಿ ಅವನನ್ನು ಬಂಧಿಸಿದರು. ಅವನನ್ನೂ ರಾಜಕುಟುಂಬವನ್ನೂ ಭಾರತಕ್ಕೆ ಗಡಿಪಾರು ಮಾಡಲಾಯಿತು. ತೀಬಾನೊಂದಿಗೆ ಬರ್ಮದ ರಾಜಮನೆತನವೂ ಸ್ವಾತಂತ್ರ್ಯವೂ ಅಂತ್ಯಗೊಂಡುವು. ವೈಸ್‍ರಾಯ್ ಲಾರ್ಡ್ ಡಫರಿನ್ ಒಂದು ಘೋಷಣೆ ಹೊರಡಿಸಿ 1886ರ ಜನವರಿ 1ರಂದು ಮೇಲಣ ಬರ್ಮವನ್ನು ಬ್ರಿಟಿಷ್ ಸಾಮಾಜ್ಯಕ್ಕೆ ಸೇರಿಸಿಕೊಂಡ. 							 							(ಎಂ.ಎನ್.ಪಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ